ಬೆಂಗಳೂರು: ಅಪರೂಪದ ಚಿಂಕೆ ಜಾತಿಯ ಚಿಂಕಾರ (ಇಂಡಿಯನ್ ಗೆಝೆಲ್) ಪ್ರಾಣಿ ಸಂರಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆ ಬೀಳಗಿ ಹಾಗೂ ಮುಧೋಳ ತಾಲೂಕು ವ್ಯಾಪ್ತಿಯಲ್ಲಿನ ಸಂರಕ್ಷಿತ ಅರಣ್ಯ ಪ್ರದೇಶವನ್ನು `ವನ್ಯಜೀವಿ ಧಾಮ' ಎಂದು ಘೋಷಿಸಲು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬೀಳಗಿ ಹಾಗೂ ಮುಧೋಳ ತಾಲೂಕು ವ್ಯಾಪ್ತಿಯ ಒಟ್ಟು 9643.68 ಹೆಕ್ಟೇರ್ ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸಲು ತೀರ್ಮಾನಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರ ತಿಳಿಸಿದ್ದಾರೆ. 1972ರಲ್ಲಿ ಚಿಂಕಾರವನ್ನು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಸಂರಕ್ಷಿತ ಪ್ರಾಣಿ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ರಾಜ್ಯದಲ್ಲಿ ಚಿಂಕಾರ ಇರುವಿಕೆಗೆ ಬಗ್ಗೆ ಬಾಗಲಕೋಟೆ ಭಾಗದ ಜನರು ಹಾಗೂ ನಿಸರ್ಗಪ್ರೇಮಿ ಗೌರವ ವನ್ಯಜೀವಿ ಪರಿಪಾಲಕ ಡಾ.ಎಂ.ಆರ್.ದೇಸಾಯಿ ಅವರಿಂದ ತಿಳಿದಿತ್ತು. 30 ವರ್ಷಗಳಿಂದ ಚಿಂಕಾರ ಸಂರಕ್ಷಣೆ, ವನ್ಯಜೀವಿಗಳ ಬಗ್ಗೆ ತೀವ್ರ ಕಾಳಜಿ ತೋರಿದ್ದ ದೇಸಾಯಿ ಅವರು ಚಿಂಕಾರ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕ್ಯಾಮೆರಾ ಟ್ರ್ಯಾಪಿಂಗ್ ಮತ್ತು ಹಿಕ್ಕೆಗಳ ಇರುವಿಕೆ ಆಧಾರದ ಮೇಲೆ ಚಿಂಕಾರಗಳ ಪತ್ತೆ ಮಾಡಲಾಯಿತು.
ಕ್ಯಾಮೆರಾ ಟ್ರ್ಯಾಪಿಂಗ್‍ನಲ್ಲಿ ಕೇವಲ ಚಿಂಕಾರ ಮಾತ್ರವಲ್ಲದೇ, ಬೂದು ತೋಳ, ನರಿ, ಗುಳ್ಳೇನರಿ, ಮೊಲ, ಕತ್ತೆ ಕಿರುಬ, ಮುಳ್ಳು ಹಂದಿ, ಕಾಡು ಹಂದಿ, ಕಾಡು ಬೆಕ್ಕು, ಹಾಗೂ ನವಿಲು ಈ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿವೆ ಎಂದು ಅವರು ತಿಳಿಸಿದರು. ವನ್ಯಜೀವಿಗಳು ಅಲ್ಲದೇ, ಅನೇಕ ಎಲೆ ಉದುರುವ ಜಾತಿಯ ಕುರುಚಲು ಗಿಡಗಂಟಿಗಳನ್ನು ಹೊಂದಿದ್ದು ಸುಮಾರು 100 ಕಿ ಮೀ ವಿಶಾಲವಾದ ಪ್ರದೇಶದಲ್ಲಿ ಕುರುಚಲು ಅರಣ್ಯ ಹರಡಿದೆ. ಶುಷ್ಕ ವಾತಾವರಣ ಇರುವುದರಿಂದ ಗುಗ್ಗುಳ, ದಿಂಡಲ, ಮಶಿವಾಳ, ಇಪ್ಪೆ, ಸೊಯಮಿಡ ಮುಂತಾದ ವಿಶಿಷ್ಟ ಸಸ್ಯರಾಶಿಯು ಕಂಡು ಬಂದಿದೆ.
ಸಸ್ಯರಾಶಿಯ ಬಗ್ಗೆ ನಡೆಸಿದ ಅಧ್ಯಯನ ಪ್ರಕಾರ ಇಲ್ಲಿ ಸುಮಾರು 43 ವಿವಿಧ ಕುಟುಂಬಗಳಿಗೆ ಸೇರಿದ 115 ಜಾತಿಗಳು ಒಟ್ಟು 143 ಪ್ರಭೇದಗಳು ಕಂಡು ಬಂದಿವೆ. ಅದರಲ್ಲಿ 6 ಪ್ರಬೇಧಗಳು ವಿನಾಶದ ಅಂಚಿನಲಿವೆ. 31 ಪ್ರಬೇಧಗಳು ಔಷದೀಯ ಗುಣಗಳಿಗೆ ಉಪಯುಕ್ತವಾಗಿವೆ. ಈ ವಿಶಾಲ ಅರಣ್ಯ ಪ್ರದೇಶದ ಸಂರಕ್ಷಣೆ ಅಗತ್ಯವಾಗಿದೆ ಎಂದು ವಿನಯ್ ಲೂತ್ರ ತಿಳಿಸಿದರು.
ಅತಿವಿರಳ ಎನಿಸಿರುವ ಚಿಂಕಾರ ಪ್ರಾಣಿಗಳ ಸಂರಕ್ಷಣೆಗಾಗಿ ವನ್ಯಜೀವಿಧಾಮ ಮಾಡಬೇಕು ಎನ್ನುವ ಒತ್ತಡ ಹಲವು ವರ್ಷಗಳಿಂದ ಇದ್ದು ಸ್ಥಳೀಯ ಸಂಸದರು, ಸಚಿವರು, ಶಾಸಕರು ಕೂಡಾ ಬೆಂಬಲವಿದೆ. ಹೀಗಾಗಿ, ಶೀಘ್ರದಲ್ಲೇ ವನ್ಯಜೀವಿಧಾಮ ಎನ್ನುವ ಹೆಸರು ಪಡೆಯಲಿದೆ.
-ವಿನಯ್ ಲೂತ್ರ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಚಿಂಕಾರ ಎಲ್ಲೆಲ್ಲಿವೆ?
ಭಾರತದಲ್ಲಿ ಗುಜರಾತ್‍ನ ಗೀರ್ ಅರಣ್ಯ ಪ್ರದೇಶ ಹಾಗೂ ರಾಜಸ್ಥಾನ ಬಿಟ್ಟರೆ ಮಹಾರಾಷ್ಟ್ರದ ಸೋಲ್ಲಾಪುರದಲ್ಲಿ ಮಾತ್ರ ಕಂಡು ಬರುತ್ತವೆ. ಉಳಿದಂತೆ ಪಾಕಿಸ್ತಾನ ಹಾಗೂ ಇರಾನ್ ದೇಶದಲ್ಲಿ ಚಿಂಕಾರಗಳಿವೆ. ರಾಜ್ಯದಲ್ಲಿ ಬಾಗಲಕೋಟೆಯಲ್ಲಿ ಮಾತ್ರ ಇದು ಕಂಡು ಬರುತ್ತದೆ. ಬಾಗಲಕೋಟೆಯಲ್ಲಿ ಕಂಡು ಬರುವ ಚಿಂಕಾರಗಳ ಸಂಖ್ಯೆ ಆರೋಗ್ಯಪೂರ್ಣವಾಗಿದ್ದು ಸಂತಾನೋತ್ಪತ್ತಿ ಮಾಡುವಷ್ಟರ ಮಟ್ಟಿಗೆ ಇವೆ. ಸಂರಕ್ಷಿಸದಿದ್ದರೆ ಇನ್ನಷ್ಟು ಕಡಿಮೆ ಆಗುವ ಭೀತಿ ಇದೆ.
ಇದು ನಾಲ್ಕು ದಶಕಗಳ ಪ್ರಯತ್ನದ ಫಲ
4 ದಶಗಳಿಂದ ಈ ಪ್ರದೇಶ ಸಂರಕ್ಷಣೆ ಯತ್ನ ನಡೆಯುತ್ತಿದ್ದು ಸ್ಥಳೀಯರು ಕೂಡಾ ಅರಣ್ಯ ಇಲಾಖೆಗೆ ಸಾಥ್ ನೀಡಿದ್ದಾರೆ. ಈ ಪ್ರದೇಶ ವನ್ಯಜೀವಿಧಾಮ ಎಂದು ಘೋಷಣೆಯಾದರೆ ಅರಣ್ಯ ಅವಲಂಬಿಸಿರುವ ಸುತ್ತ ಮುತ್ತಲಿನ ಗ್ರಾಮಗಳ ಜನರಿಗೆ ಯಾವುದೇ ಸಮಸ್ಯೆ ಇಲ್ಲ. ಅವರ ಹಕ್ಕುಗಳಿಗೆ ತೊಂದರೆ ಇಲ್ಲ. ಆದರೆ, ಹಲವು ವರ್ಷಗಳಿಂದ ಭೇಟಿಗೆ ಕಡಿವಾಣ ಹಾಕಲಾಗಿದ್ದು ಇನ್ನು ಮುಂದೆ ಇನ್ನಷ್ಟು ಕಠಿಣವಾಗಲಿದೆ ಎಂದರು. ಅರಣ್ಯ ಸುತ್ತ ಮುತ್ತಲಿನ ಗ್ರಾಮಗಳ ಜನರು ಮೇಕೆ, ದನಕರುಗಳನ್ನು ಮೇಯಿಸುವುದು, ಉರುವಲಿಗಾಗಿ ಕಟ್ಟಿಗೆ ಸಂಗ್ರಹಿಸುವುದಕ್ಕೆ ತೊಂದರೆ ಇಲ್ಲ. ಈ ಮೂಲಕ ಸುತ್ತ ಮುತ್ತಲಿನ ಗ್ರಾಮಗಳ ಜನರ ಹಕ್ಕುಗಳಿಗೆ ತೊಂದರೆ ಇಲ್ಲ.